ನುಂದ ಋಷಿ
	1377-1440. ಕಾಶ್ಮೀರಿ ಕವಿ, ಸಂತ. ಜಾತಿಯಿಂದ ಮುಸಲ್ಮಾನ. ಈತನ ಮೊದಲ ಹೆಸರು ನೂರ್ ಉದ್‍ದಿನ್. ಹುಟ್ಟಿದ್ದು ಶ್ರೀನಗರದಿಂದ ಇಪ್ಪತ್ತೈದು ಮೈಲು ದೂರದಲ್ಲಿರುವ ಖೈಮುಹ್ ಎಂಬ ಊರಿನಲ್ಲಿ. ತಾಯಿ ಘನ ವಿದುಷಿ ಶಾರದಾಮಾ. ಬಾಲ್ಯದಿಂದಲೂ ಈತನ ಮನಸ್ಸು ವಿರಕ್ತಿಯ ಕಡೆಗೆ ಇತ್ತು. ಹಲವಾರು ವೃತ್ತಿಗಳಲ್ಲಿ ತೊಡಗಿದವನಾದರೂ ಯಾವುದರಲ್ಲೂ ಯಶಸ್ಸು ಸಾಧಿಸಲಿಲ್ಲ. ಜಯದೇದ್ ಎಂಬ ಹೆಣ್ಣನ್ನು ಮದುವೆಯಾದನಾದರೂ ವಿರಕ್ತ ಮನೋಭಾವದ ಈತ ಒಂದು ದಿನ ಸಂಸಾರವನ್ನು ಬಿಟ್ಟು ದಟ್ಟವಾದ ಅರಣ್ಯವೊಂದನ್ನು ಪ್ರವೇಶ ಮಾಡಿ ಹನ್ನೆರಡು ವರ್ಷಗಳವರೆಗೆ ತಪಸ್ಸನ್ನು ನಡೆಸಿದ. ಬಳಿಕ ಕಾವ್ಯ ರಚನೆಗೆ ತೊಡಗಿದ. ಇವನ ಹಾಡುಗಳು ಕಾಶ್ಮೀರದಲ್ಲಿ ಬಹು ಜನಪ್ರಿಯವಾಗಿವೆ. ಇವನ ಕಾವ್ಯದ ದ್ವನಿ ವಿಚಾರ 	ಪ್ರಚೋದಕವಾದರೂ ಅದರ ವಸ್ತು ನೀತಿಪರವಾಗಿದ್ದು ಸುಭಾಷಿತಗಳಿಂದಲೂ ಲೋಕೋಕ್ತಿಗಳಿಂದಲೂ ಅಪ್ಯಾಯಮಾನವಾಗಿದೆ. ತನ್ನ ಸಂಯಮೀ ಜೀವನವನ್ನು ವರ್ಣಿಸುವಂಥ ಪದ್ಯವೊಂದರಲ್ಲಿ ಈತ ಹೀಗೆ ಹೇಳುತ್ತಾನೆ:

           ಗೀಫ್ ಹಾ ವಂದೈ ಸ್ವರ್ಗ್‍ಲರಿ. ಜಿಂದಾಹಾವಲೈ ಪಟಯಕೀ
           ಗರ್‍ಗರ್ ಜನ್ ರಾಜಿ ಶೋಕನ್ಯನ ಜನಗಿಂದೈ
           ಪರೀಹಹಾ ವನೈ ಫುರಿಡಾಇ.

	ಗುಹೆಯೆಂಬುದೇ ತನ್ನ ಸ್ವರ್ಗ. ಹರಿದು ಹೋದ, ಜೀರ್ಣವಾದ ಬಟ್ಟೆಬರೆಗಳೇ ನನಗೆ ರೇಷ್ಮೆ ಉಡುಗೆಗಳು. ನಾನು ಇಲ್ಲಿನ ಇಲಿಗಳೊಂದಿಗೆ ಆಡುತ್ತೇನೆ. ಆದ್ದರಿಂದ ನನಗೆ ಒಂದು ವರ್ಷವೆಂದರೆ ಎರಡೂವರೆ ಘಂಟೆಗಳಂತೆ ಕಳೆದು ಹೋಗುತ್ತದೆ.

	ಕಾಶ್ಮೀರದಲ್ಲಿನ ಋಷಿವರ್ಗದ ಸ್ಥಾಪಕ ಪಿತಾಮಹನಾದ ಈತನನ್ನು ಜನರೆಲ್ಲ ನುಂದ ಋಷಿ ಎಂದೇ ಕರೆಯುತ್ತಿದ್ದರು.

	ನುಂದ ಋಷಿಯ ಕವಿತೆಗಳೆಲ್ಲ ರಹಸ್ಯವಾದಿ ಪಂಥದವಾಗಿವೆ. ಮುಸಲ್ಮಾನನಾದರೂ ಈತನಿಗೆ ಹಿಂದೂಗಳ ಮೇಲೆ ದ್ವೇಷದ ಭಾವನೆ ಇರಲಿಲ್ಲ. ಅವರ ಬಗ್ಗೆ ಸಹನೆ, ತಾಳ್ಮೆ, ಗೌರವ ಭಾವನೆ ಇದ್ದುವು. ಪರಮೇಶ್ವರ ಪ್ರಾಪ್ತಿಯಾಗಬೇಕಾದರೆ ಮಂದಿರಗಳಿಗೆ ಅಥವಾ ಮಸೀದಿಗಳಿಗೆ ಹೋಗಬೇಕಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಮೇಶ್ವರನ ಅಂಶವಿದೆ. ಅದನ್ನು ಪ್ರಕಟಪಡಿಸಿದರಷ್ಟೇ ಸಾಕು ಆತನಿಗೆ ಈಶ್ವರ ಪ್ರಾಪ್ತಿಯಾಗುತ್ತದೆಂಬುದು ಈ ಸಂತನ ಅಭಿಮತ.						     (ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ